ದೈವೀ ಅಧಿಕಾರ -
	ದೊರೆಗಳ ಪ್ರಾಧಿಕಾರ ನೇರವಾಗಿ ದೇವರಿಂದಲೇ ಬಂದದ್ದೆಂದೂ ಆದ್ದರಿಂದ ಅವರು ಅವನಿಗೆ ಮಾತ್ರವೇ ಹೊಣೆಗಾರರಾಗಿರತಕ್ಕದ್ದೇ ವಿನಾ ತಮ್ಮ ಪ್ರಜೆಗಳಿಗೆ ಅಲ್ಲವೆಂದೂ ಪ್ರಜೆಗಳು ತಮ್ಮ ದೊರೆಗಳಿಗೆ ಸಂಪೂರ್ಣವಾಗಿ ವಿಧೇಯರಾಗಿರತಕ್ಕದ್ದೆಂದೂ ಸಾಧಿಸುವ ಸಿದ್ಧಾಂತ (ಡಿವೈನ್ ರೈಟ್).  ಪ್ರಾಧಿಕಾರ ದೈವದತ್ತವಾದ್ದು ಎಂಬುದಾಗಿ ಯೂರೋಪಿನ ಮಧ್ಯಯುಗದ ರಾಜ್ಯಶಾಸ್ತ್ರ ಚಿಂತಕರು ಹೇಳುತ್ತದ್ದರಾದರೂ ಆ ಪ್ರಾಧಿಕಾರ ಅಪರಿಮಿತವಾದ್ದು ಎಂಬುದಾಗಿ ಅವರು ವಾದಿಸುತ್ತಿರಲಿಲ್ಲ  ಮಧ್ಯಯುಗದಲ್ಲಿ ಅಂಥ ವಾದಕ್ಕೆ ಪ್ರಮೇಯ ಇರಲಿಲ್ಲ.  ಪೋಪ್ ಅಧಿಕಾರ ವ್ಯಾಪ್ತಿಯನ್ನು ತಡೆಗಟ್ಟುವ ಸಲುವಾಗಿ, ಅಂಥ ಪ್ರತಿಭಟನೆ ನ್ಯಾಯಬದ್ಧವಾದ್ದೆಂದು ಸ್ಥಾಪಿಸಲು ದೊರೆಯ ದೈವೀ ಅಧಿಕಾರವನ್ನು ಎತ್ತಿ ಹಿಡಿಯಲಾಗುತ್ತಿತ್ತು.  ರಾಜ್ಯ ದೇವರ ಸೃಷ್ಟಿಯೆಂದೂ ರಾಜ ದೇವರ ಪ್ರತಿನಿಧಿಯೆಂದೂ ವಾದಿಸಲಾಗಿತ್ತು.  ದೇವರ ಪ್ರತಿಧಿಯಾದ ದೊರೆ ಮತ್ರ್ಯಲೋಕದ ಯಾರಿಗೂ ಯಾವ ಸಂಸ್ಥೆಗೂ ತಲೆಬಾಗಬೇಕಾದ್ದಿಲ್ಲವೆಂದೂ ವಾದಿಸಲಾಗುತ್ತಿತ್ತು.  16, 17 ನೆಯ ಶತಮಾನಗಳಲ್ಲಿ ದೊರೆಗಳ ಪ್ರಾಧಿಕಾರ ನಿರುಪಾಧಿಕವಾದಾಗ ಈ ಹಳೆಯ ಸಿದ್ಧಾಂತವನ್ನು ಹೊಸ ಉದ್ದೇಶಕ್ಕೆ ಬಳಸಿಕೊಳ್ಳಲು ಆರಂಭವಾಯಿತು.  ತಮ್ಮ ಪ್ರಜೆಗಳು ಬೇಷರತ್ತಾಗಿ ತಮಗೆ ವಿಧೇಯರಾಗಿರಬೇಕು - ಎಂಬುದಾಗಿ ವಾದಿಸಲಾಯಿತು.  ದೇವರಿಗೆ ಜವಾಬ್ದಾರನಾದ ರಾಜನ ಪ್ರಾಧಿಕಾರವನ್ನು ಪ್ರಜೆಗಳು ಪ್ರಶ್ನಿಸುವಂತಿಲ್ಲವೆಂದೂ ರಾಜನ ವಿರುದ್ಧವಾಗಿ ಕೆಲಸ ಮಾಡಿದರೆ ದೇವರಿಗೆ ವಿರೋಧವೆಸಗಿದಂತೆಯೇ ಎಂದೂ ಸಿದ್ಧಾಂತಿಸಲಾಯಿತು.  ರಾಜರು ತಮ್ಮ ನಿರಂಕುಶ ಪ್ರಭುತ್ವವನ್ನು ಭದ್ರಪಡಿಸಿಕೊಳ್ಳಲು ಈ ವಾದವನ್ನು ಹೆಚ್ಚಾಗಿ ಅವಲಂಬಿಸಿದರು.

	ಮಧ್ಯಯುಗದ ಕೊನೆಯಲ್ಲಿ ಯೂರೋಪಿನ ಹಲವು ರಾಜರು ತಮ್ಮ ಪ್ರಾಧಿಕಾರ ದೈವದತ್ತವಾದ್ದೆಂದು ವಾದಿಸಿದರು.  ರೋಮನ್ ಸಾಮ್ರಾಜ್ಯದಲ್ಲಿ ಚಕ್ರವರ್ತಿಯನ್ನು ಪೂಜಿಸುವ ವಾಡಿಕೆಯಿತ್ತಾದರೂ ದೈವೀ ಅಧಿಕಾರದ ಪ್ರತಿಪಾದನೆ ಕಂಡುಬರುವುದಿಲ್ಲ.  8ನೆಯ ಶತಮಾನದಲ್ಲಿ ಮೆರೊ ವಿಂಗಿಯನ್ ಸಂತತಿಯನ್ನು ಕೊನೆಗೊಳಿಸಿ ಕ್ಯಾರೊಲಿಂಗಿಯನ್ ಸಂತತಿಯನ್ನು ಸ್ಥಾಪಿಸಿದ ಫ್ರ್ಯಾಂಕ್ ದೊರೆ ಪೆಪಿನ್ ಪಾರ್ಟ್ ಎಂಬವನು ತಾನು ದೇವರ ಪ್ರತಿನಿಧಿಯೆಂದು ಘೋಷಿಸಿಕೊಂಡ.  ಹೀಗೆಂದು ಹೇಳಿಕೊಂಡ ರಾಜರಲ್ಲಿ ಇವನೇ ಮೊದಲಿಗ.  ಹದಿನಾರು ಮತ್ತು ಹದಿನೇಳನೆಯ ಶತಮಾನಗಳಲ್ಲಿ ಇದು ನವೀಕರಿಸಲ್ಪಟ್ಟಿತು.  ಯೂರೋಪಿನ ರಾಜ್ಯಗಳಲ್ಲೆಲ್ಲ ಹೆಚ್ಚು ಮಟ್ಟಿಗೆ ಪ್ರಚಾರಕ್ಕೆ ಬಂದು ಫ್ರಾನ್ಸ್ ಇಂಗ್ಲೆಂಡ್‍ಗಳಲ್ಲಿ ಪ್ರಮುಖವಾಗಿತ್ತು.

	ದೊರೆಗಳ ದೈವೀ ಅಧಿಕಾರವನ್ನು ಹದಿನೇಳನೆಯ ಶತಮಾನದಲ್ಲಿ ಪ್ರತಿಪಾದಿಸಿದವರಲ್ಲಿ ಥಾಮಸ್ ಹಾಬ್ಸ್, ಸ್ಯಾಲ್ಮೆಷಿಯಸ್ ರಾಬರ್ಟ್ ಫಿಲ್ಮರ್ ಪ್ರಮುಖರು.  ರಾಜನ ಅಧಿಕಾರ ಸಾಮಾಜಿಕ ಕರಾರಿನಂತೆ ಜನಾಭಿಪ್ರಾಯದಿಂದ ಬಂದದ್ದೆಂದು ವಾದಿಸಿ, ದೈವೀ ಅಧಿಕಾರ ಉಪದ್ರವಕಾರಕವೆಂದು ಈ ಸಿದ್ಧಾಂತವನ್ನು ಉಗ್ರವಾಗಿ ವಿರೋಧಿಸಿದವರ ಪೈಕಿ ಜಾನ್ ಮಿಲ್ಟನ್, ಆಲ್ಜೆರ್ನಾನ್ ಸಿಡ್ನಿ ಮತ್ತು ಜೇಮ್ಸ್ ಹ್ಯಾರಿಂಗ್ಟನ್ ಪ್ರಮುಖರು.

	ಇಂಗ್ಲೆಂಡಿನಲ್ಲಿ ಟ್ಯೂಡರ್ ದೊರೆಗಳ ಕಾಲದಲ್ಲಿ ಈ ಸಿದ್ಧಾಂತ ಪ್ರಚಾರಕ್ಕೆ ಬಂತಾದರೂ ಅವನ ಅನಂತರ 17ನೆಯ ಶತಮಾನದಲ್ಲಿ ಅಧಿಕಾರಕ್ಕೆ ಬಂದ ಸ್ಟ್ಯೂಯರ್ಟರ ಕಾಲದಲ್ಲಿ ಪಾರ್ಲಿಮೆಂಟು ಹೆಚ್ಚು ಹೆಚ್ಚಾಗಿ ದೊರೆಯ ಅಧಿಕಾರವನ್ನು ಪ್ರಶ್ನಿಸತೊಡಗಿತು.  1 ನೆಯ ಜೇಮ್ಸ್ ಮತ್ತು 1 ನೆಯ ಚಾಲ್ಸ್‍ರು ದೈವೀ ಅಧಿಕಾರವನ್ನು ವಿಶೇಷವಾಗಿ ಎತ್ತಿಹಿಡಿದರು.  ಪಾರ್ಲಿಮೆಂಟಿಗೂ ಸ್ಟೂಯರ್ಟ್ ದೊರೆಗಳಿಗೂ ಘರ್ಷಣೆಗಳು ನಡೆದು ಕೊನೆಗೆ 1688 ರ ಕ್ರಾಂತಿ ನಡೆದು ಪಾರ್ಲಿಮೆಂಟಿನ, ಆ ಮೂಲಕ ಪ್ರಜೆಗಳ, ಸಾರ್ವಭೌಮತ್ವ ಸ್ಥಾಪಿಸಲಾಯಿತು.  ಫ್ರಾನ್ಸಿನಲ್ಲಿ ಬೂರ್‍ಬಾ ಸಂತತಿಯ ರಾಜರು ಈ ಸಿದ್ಧಾಂತವನ್ನು ಹೆಚ್ಚು ಮಟ್ಟಿಗೆ ಅವಲಂಬಿಸಿದ್ದರು.   ಅಂಥವರ ಪೈಕಿ 14 ನೆಯ ಲೂಯಿ (1638 - 1715) ಪ್ರಸಿದ್ದ.  ದೈವೀ ಅಧಿಕಾರ ಸಿದ್ಧಾಂತದ ಪ್ರತಿಪಾದನೆ ಮತ್ತು ರಾಜರ ನಿರಕುಂಶಾಧಿಕಾರ ಕೊನೆಗೆ ಬೂರ್‍ಬಾ ಮನೆತನದ ಆಳ್ವಿಕೆಗೆ ಚ್ಯುತಿ ತಂದಿತು.  ಅದು ಫ್ರಾನ್ಸಿನ ಮಹಾಕ್ರಾಂತಿಯಲ್ಲಿ ಪರ್ಯವಸಾನಗೊಂಡು ಅಲ್ಲಿ ರಾಜ್ಯ ಪ್ರಭುತ್ವ  ಕೊನೆಗೊಂಡಿತು, ಅನಂತರ ದೈವೀ ಅಧಿಕಾರ ಸಿದ್ಧಾಂತ ತನ್ನ ಪ್ರಭಾವ ಕಳೆದುಕೊಂಡಿತು.

	ಪ್ರಾಚೀನ ಭಾರತದ ಹಲವು ಧರ್ಮಶಾಸ್ತ್ರ ಗ್ರಂಥಗಳಲ್ಲಿ ದೈವದತ್ತಾಧಿಕಾರ ನಿರೂಪಣೆಯ ಛಾಯೆ ಕಂಡುಬರುತ್ತದೆ.  ಐತ್ತರೇಯ ಅರಣ್ಯಕ, ಮನುಧರ್ಮಶಾಸ್ತ್ರ ಮಹಾಭಾರತ ಮೊದಲಾದ ಗ್ರಂಥಗಳಲ್ಲಿ ಬ್ರಹ್ಮ ಮನುವನ್ನು ಸೃಷ್ಟಿಸಿ ಅವನಿಗೆ ರಾಜತ್ವವನ್ನು ವಹಿಸಿ ಮತ್ರ್ಯಲೋಕಕ್ಕೆ ಕಳುಹಿಸಿದ ವರ್ಣನೆ ಇದೆ.  ರಾಜನೇ ಪ್ರತ್ಯಕ್ಷ ದೇವತೆ ಎಂಬ ಮಾತು ಪ್ರಚಾರದಲ್ಲಿತ್ತು.  ರಾಜರು ದೇವ ಎಂಬ ಪದವನ್ನು ತಮ್ಮ ಹೆಸರಿನ ಕೊನೆಯಲ್ಲಿ ಸೇರಿಸಿಕೊಳ್ಳುವುದೂ ವಾಡಿಕೆಯಾಗಿತ್ತು.  ಆದಾಗ್ಯೂ ಭಾರತದ ಯಾವೊಬ್ಬ ರಾಜನೂ ದೈವೀ ಅಧಿಕಾರವನ್ನು ನಂಬಿ ಹಾಗೆಂದು ಹೇಳಿಕೊಂಡು ಆಡಳಿತ ನಡೆಸಲಿಲ್ಲ.  ಕೌಟಿಲ್ಯನ ಅರ್ಥಶಾಸ್ತ್ರವೇ ಮುಂತಾದ ಗ್ರಂಥಗಳಲ್ಲಿ ದೊರೆಯ ಕರ್ತವ್ಯಗಳನ್ನು ಸ್ಪಷ್ಟಪಡಿಸಲಾಗಿದೆ.  ಅಲ್ಲದೆ ರಾಜ ಹೇಗೋ ಪ್ರಜೆ ಹಾಗೆ ಎಂಬ ಮಾತು ಪ್ರಚಾರದಲ್ಲಿದ್ದು ರಾಜ ಕೇವಲ ಧರ್ಮದ ಸೇವಕನಾಗಿ ಧರ್ಮವನ್ನು ಪರಿಪಾಲಿಸುವ ಕರ್ತವ್ಯದಲ್ಲಿ ನಿರತನಾಗಬೇಕೆಂದು ಸ್ಪಷ್ಟಪಡಿಸಲಾಗಿದೆ.  ರಾಜ್ಯಕ್ಕಾಗಲಿ ಪ್ರಜೆಗಳಾಗಲಿ ದ್ರೋಹವೆಸಗಿದರೆ ಧರ್ಮವನ್ನು ಅತಿಕ್ರಮಿಸಿದರೆ ನನ್ನ ಅಧಿಕಾರವೂ, ಪ್ರಾಣವೂ, ವಂಶವೂ ಅಂತ್ಯವಾಗುವುದು ಎಂಬುದಾಗಿ ಪಟ್ಟಬಂಧ ಮಹೋತ್ಸವದ ಸಮಯದಲ್ಲಿ ರಾಜ ಪ್ರತಿಜ್ಞೆ ಸ್ವೀಕರಿಸಬೇಕಾಗಿತ್ತು.   ರಾಜ ತನ್ನ ಪ್ರಜೆಗಳ ಮತ್ತು ಧರ್ಮ ಸೇವಕನೆಂಬ ಅಂಶ ಸ್ಪಷ್ಟವಾಗಿದೆ.  ಆದ್ದರಿಂದ ದೈವೀ ಅಧಿಕಾರ ಭಾರತದಲ್ಲಿ ಪಾಶ್ಚಾತ್ಯದಲ್ಲಿದ್ದಂತೆ ಕ್ಷಾತ್ರರೂಪದಲ್ಲಿ ಪ್ರಚಾರದಲ್ಲಿರಲಿಲ್ಲ.
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ